
ಸಂಪಾದಕರು
ಪ್ರಜಾವಾಣಿ
ಸ್ವಾಮಿ,
ಇಂದಿನ ಪತ್ರಿಕೆಯಲ್ಲಿ ಪ್ರಕಟವಾದ ಜೀವ ವೈವಿಧ್ಯತೆ ಕುರಿತ ಸಂಪಾದಕೀಯ ಬಹಳ ಮಹತ್ತರ ಹಾಗೂ ಸಂದರ್ಭೋಚಿತ. ಬೆಂಗಳೂರು ವಿವಿ ಆವರಣದಲ್ಲಿರುವ ಜೀವ ವೈವಿಧ್ಯ ವನದ ಜೀವ ತೆಗೆಯುವ ಹುನ್ನಾರದ ಲೇಖನ ಸಂಪಾದಕೀಯ ಲೇಖನಕ್ಕೆ ಪೂರಕವಾಗಿದೆ. ವಿವಿ ಕುಲಪತಿಗಳ ಯೋಗ ವಿವಿ ತೆರೆಯಲು ಅನುಮತಿ ಸಂಪಾದಕೀಯಕ್ಕೆ ಅತಿರುಕ್ತವಾಗಿರುವುದನ್ನು ಹಾಗೂ ಹೆಸರುವಾಸಿ, ನ್ಯಾಕ್ ಪರಿ ವೀಕ್ಷಣೆಯಲ್ಲಿ ಮುಕ್ತವಾಗಿ ಪ್ರಶಂಸಿಸಲಾದ ಜೈವಿಕ ವನ ಹಾಳುಗೆಡವಿ ಕಟ್ಟಡಗಳ ನಿರ್ಮಾಣಕ್ಕೆ ಅನುವಾಗುವಂತೆ ಮಾಡಿರುವುದು ಅಕ್ಷಮ್ಯ. ಒಂದು ಸಾವಿರ ಕೋಟಿ ಸುರಿದು ಹೊಸ ವಿವಿ ಆರಂಭಿಸಿದರೆ ಎನಿತು ಕಟ್ಟಡಗಳು ಏಳಬಹುದು ಎನ್ನುವ ಪರಿಕಲ್ಪನೆ ಇಲ್ಲದೆ ಬಾಲಿಶ ಹೇಳಿಕೆ ನೀಡಿದ್ದಾರೆ. ಇವರು ನಮ್ಮ ನಿಮ್ಮೆಲ್ಲರನ್ನೂ ಮೂಢರು ಎಂದುಕೊಂಡಿರುವಂತಿದೆ. ಇದು ಲಾಭ ಬುಡಕತನದ ಪರಾಕಾಷ್ಠೆ. ಕೇಂದ್ರ ಮಂತ್ರಿಗಳ ಮೆಚ್ಚಿಸಿ ಇನ್ನಾವುದೋ ಕುರ್ಚಿಗಾಗಿ ತನಗೆ ಆಶ್ರಯ ನೀಡಿದ ಬೆಂಗಳೂರು ವಿವಿಯನ್ನು ಬಲಿಪಶುವಾಗಿಸಿರುವುದು ವಿದ್ರೋಹವದ ಪರಮಾವಧಿ. ನ್ಯಾಯಾಲಯದಿಂದ ವಜಾ ಆಗಿ ಒಂದೂವರೆ ವರ್ಷದ ನಂತರವೂ ಕುಲಪತಿ ಕುರ್ಚಿಗಾಗಿ ಏನೇನು ಮಾಡಿರಬಹುದೆಂದು ಊಹಿಸಿಕೊಂಡರೆ ಶೈಕ್ಷಣಿಕ ಕ್ಷೇತ್ರದ ಅಧೋಗತಿಗೆ ಕಾರಣೀಭೂತರಾಗುವುದು ವಿದಿತ. ಇಂತಹವರನ್ನು ಸಮಾಜ ಗಮನಿಸುತ್ತಿದೆ. ಇನ್ನಷ್ಟು ವಿವಿ ಜಾಗವನ್ನು ಹಾಳು ಮಾಡದಂತಾಗಲಿ. ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಶೇಷ ಲೇಖನಗಳಲ್ಲಿ ಬಣ್ಣಿಸಿರುವ ಸುಂದರ ಆಮ್ಲಜನಕದ ಬ್ಯಾಂಕ್ ಉಳಿಯುವಂತಾಗಲಿ, ಈ ಮಹತ್ಕಾರ್ಯದಲ್ಲಿ ತಮ್ಮ ಶ್ರಮಕ್ಕೆ ಅನಂತಾನಂತ ವಂದನೆಗಳು.
ಇಂತಿ ತಮ್ಮ ವಿಶ್ವಾಸಿ,
ಜೋಸೆಫ್ ಹೂವರ್