ಪ್ರಸ್ತುತ ಇರುವ ಸ್ಥಳೀಯ ಸರ್ಕಾರವನ್ನೇ ಮುಂದಿನ ಚುನಾವಣೆವರೆಗೆ ಸ್ಥಳೀಯಾಡಳಿತ ಸಮಿತಿಯಾಗಿ ಮುಂದುವರೆಸುವುದು

0 have signed. Let’s get to 100!


ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಗೆ ಸಕಾಲದಲ್ಲಿ ಚುನಾವಣೆ ನಡೆಸುವುದು ಅಥವಾ ಚುನಾವಣೆ ಮುಂದೂಡಿದ್ದಲ್ಲಿ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯ ಬದಲಿಗೆ ಈಗ  ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಸ್ಥಳೀಯಾಡಳಿತ ಸಮಿತಿಯಾಗಿ ಚುನಾವಣೆ ನಡೆಯುವವರೆಗೆ ಮುಂದುವರೆಸುವ ಬಗ್ಗೆ ಹಕ್ಕೊತ್ತಾಯ.

ಇಡೀ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ – 19ರ ಪರಿಣಾಮ ಕರ್ನಾಟಕದ ಮೇಲೂ ಆಗಿರುವುದರಿಂದ ರಾಜ್ಯದಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ವಿವಿಧ ರೀತಿಯ ಬದಲಾವಣೆಗಳಾಗಿವೆ. ಇದರ ಪರಿಣಾಮ ಕರ್ನಾಟಕದಲ್ಲಿ, ಇದೇ ಮೇ ತಿಂಗಳ ಅಂತ್ಯದೊಳಗೆ ನಡೆಯಬೇಕಿದ್ದ ಗ್ರಾಮ ಪಂಚಾಯತ್ ಚುನಾವಣೆಯ ಮೇಲೂ ಉಂಟಾಗಿದೆ. ಇಲ್ಲಿಯವೆರೆಗೆ ಘೋಷಣೆಯಾಗಬೇಕಿದ್ದ ಚುನಾವಣೆ ಇನ್ನೂ ಘೋಷಣೆಯಾಗದ ಹಿನ್ನೆಲೆಯಲ್ಲಿ, ಈಗಾಗಲೇ ಸರ್ಕಾರ ಹೇಳಿರುವಂತೆ ಸುಮಾರು 6 ತಿಂಗಳುಗಳ ಕಾಲ  ಚುನಾವಣೆಯನ್ನು ಮುಂದೂಡಬೇಕಾಗಿರುವುದು ಅನಿವಾರ್ಯವಾಗಿದೆ. ಆದರೆ ಆಡಳಿತಾಧಿಕಾರಿಯ ನೇಮಕ ಅಥವಾ ಬೇರೆ ಯಾವುದೋ ಆಡಳಿತ(ಉಸ್ತುವಾರಿ) ಸಮಿತಿ ನೇಮಕ ಮಾಡುವ ಸರ್ಕಾರದ ಆಲೋಚನೆ ಕಾನೂನಿನಲ್ಲಿ ಅವಕಾಶವಿದ್ದರೂ ಈ ವಿಕೋಪದ ಪರಿಸ್ಥಿತಿ ಇರುವಾಗ ಸೂಕ್ತವಾದುದಲ್ಲ.

ಇಡೀ ರಾಜ್ಯಾದ್ಯಂತ ಕೋವಿಡ್ – 19ರ ಪರಿಸ್ಥಿತಿ ಘೋಷಣೆ ಆದಾಗ ಮೊಟ್ಟ ಮೊದಲು ಸರ್ಕಾರ ಮಾಡಿದ ಕೆಲಸವೆಂದರೆ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳ, ಸ್ವಯಂ ಸೇವಾ ಸಂಸ್ಥೆಗಳ, ಸ್ವಯಂಸೇವಕರ ಸಂಯೋಜನೆಯಲ್ಲಿ ಕಾರ್ಯಪಡೆ ರೂಪಿಸಿ ಇಡೀ ಪಂಚಾಯತ್ ನ ವಿಕೋಪ ನಿರ್ವಹಣೆಯ ಜವಾಬ್ದಾರಿಯ ನೇತೃತ್ವವನ್ನು ಗ್ರಾಮ ಸರ್ಕಾರಕ್ಕೆ ನೀಡಿದ್ದು. ಗ್ರಾಮ ಪಂಚಾಯತ್ ನ ಚುನಾಯಿತ ಪ್ರತಿನಿಧಿಗಳು ಪಂಚಾಯತ್ ರಾಜ್ ವ್ಯವಸ್ಥೆಯ ಆಶಯದಂತೆ ಪಕ್ಷಾತೀತವಾಗಿ ತಮ್ಮ ಬದ್ಧತೆಯನ್ನು ಜನರಿಗೆ ತೋರಿದ್ದಾರೆ. ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಅನುಭವ ಪಡೆದು, ಪಂಚಾಯತ್ ಅಭಿವೃದ್ಧಿಯಲ್ಲಿ ಅವರ ಪಾತ್ರ ಹಾಗೂ ಜವಾಬ್ದಾರಿಗಳ ಮಹತ್ವವನ್ನು ಆಳವಾಗಿ ಅರ್ಥೈಸಿಕೊಂಡಿದ್ದರಿಂದ ಇಂತಹ ವಿಕೋಪದ ಪರಿಸ್ಥಿತಿಯನ್ನು ಸಹ ಸ್ಥಳೀಯವಾಗಿ ನಿಭಾಯಿಸಲು ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಜನರ ಅಗತ್ಯತೆಗಳೇನು, ಅಲ್ಲಿನ ಪರಿಸ್ಥಿತಿ ಹೇಗಿದೆ, ಆಗಬೇಕಾದ ಪ್ರಮುಖ ಕಾರ್ಯಗಳೇನು ಹಾಗೂ ಮುಂದಿರುವ ಸವಾಲುಗಳೇನು ಎನ್ನುವುದನ್ನು ಕೂಲಂಕುಷವಾಗಿ ಗಮನಿಸಿದ್ದಾರೆ.

ಒಂದು ರೀತಿಯಲ್ಲಿ ತುರ್ತು ಪರಿಸ್ಥಿತಿಯಂತೆ ಇರುವ ಈ ಸಮಯದಲ್ಲಿ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಸ್ಥಳೀಯ ಸರ್ಕಾರದ ಅಂಗವಾಗಿ, ವಿಕೋಪವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ, ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಉತ್ತರದಾಯಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಚುನಾಯಿತ ವರ್ಗ ಹಾಗೂ ಅಧಿಕಾರಿ ವರ್ಗ ಒಗ್ಗೂಡಿ ಆಡಳಿತ ನಡೆಸಿರುವುದೇ ಈ ಪರಿಸ್ಥಿಯ ಸಮರ್ಪಕ ನಿರ್ವಹಣೆಗೆ ಪ್ರಮುಖ ಕಾರಣ. ಈ ವಿಕೋಪದ ಪರಿಸ್ಥಿತಿ ಇನ್ನೂ ಮುಂದುವರೆಸುತ್ತಿರುವ ಈ ಸವಾಲಿನ ಸಮಯದಲ್ಲಿ, ಪಂಚಾಯತ್ ಆಡಳಿತಕ್ಕೆ ಕೇವಲ ಆಡಳಿತಾಧಿಕಾರಿಯ ಅಥವಾ ಆಡಳಿತ ಸಮಿತಿಯ ನೇಮಕ ಅಸಮಂಜಸವಾದುದು. ಸರ್ಕಾರದ ಈ ಆಲೋಚನೆ, ನಿರ್ಧಾರವನ್ನು ತಕ್ಷಣವೇ ಕೈಬಿಟ್ಟು, ಪ್ರಸ್ತುತ ಇರುವ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿರುವ ಸ್ಥಳೀಯ ಸರ್ಕಾರವನ್ನೇ ಮಧ್ಯಂತರ ಸ್ಥಳೀಯ ಸ್ವಯಂ ಸರ್ಕಾರವಾಗಿ (ಸ್ಥಳೀಯಾಡಳಿತ ಸಮಿತಿಯಾಗಿ) ಮುಂದುವರಿಸಬೇಕು.

"ಸ್ಥಳೀಯ ಆಡಳಿತಕ್ಕಾಗಿ ಒಕ್ಕೊರಲ ಧ್ವನಿ ಎತ್ತಿ.."

ಮಾಹಿತಿಗಾಗಿ: http://gpha.weebly.com/ ಜಾಲ ತಾಣಕ್ಕೆ ಭೇಟಿ ಕೊಡಿ.

ಸಂಪರ್ಕಕ್ಕಾಗಿ: 9945375430